ಜುರಾಸಿಕ್ -
ಮೀಸೋಜೆóೂೀಯಿಕ್ (ಮಧ್ಯಜೀವಿಕಲ್ಪ) ಮಧ್ಯಭಾಗದಲ್ಲಿ ನಿಕ್ಷೇಪಗೊಂಡ ಶಿಲಾಸ್ತೋಮ. ಸಾಮಾನ್ಯವಾಗಿ ಇದರ ಕೆಳಕ್ಕೆ ಟ್ರಯಾಸಿಕ್ ಮತ್ತು ಮೇಲಕ್ಕೆ ಕ್ರಿಟೇಷಸ್ ವ್ಯವಸ್ಥೆ ಉಂಟು. ಸ್ವಿಟ್‍ಜರ್ಲೆಂಡಿನ ಜುರ ಪರ್ವತಗಳಿಂದ ಜುರಾಸಿಕ್ ಪದ ನಿಷ್ಪನ್ನವಾಗಿದೆ. ಹೆಚ್ಚಾಗಿ ಅವಸಾದನ (ಜಲಜ) ಶಿಲೆಗಳೇ ಇದ್ದರೂ ಜ್ವಾಲಾಮುಖಿಜ ಶಿಲೆಗಳು ಕೆಲವು ಭಾಗಗಳಿಗೆ ಸೀಮಿತವಾಗಿವೆ; ಉದಾಹರಣೆಗೆ ಉತ್ತರ ಅಮೆರಿಕದ ಕಾರ್ಡಿಲ್ಗೆರ. ಎಂ. ಹೊವಾರ್ತ್ ಎಂಬಾತನ ಪ್ರಕಾರ ಜುರಾಸಿಕ್ ಕಾಲ ಸುಮಾರು 13.5 ಕೋಟಿ ವರ್ಷಗಳ ಹಿಂದೆ ಅಂತ್ಯವಾಯಿತು; ಅದು 5.5 ಕೋಟಿ ವರ್ಷಗಳಿಂದ 6 ಕೋಟಿ ವರ್ಷಗಳವರೆಗೆ ವ್ಯಾಪಿಸಿರಬಹುದೆಂದು ಊಹೆ. ಈ ಅವಧಿಯಲ್ಲಿ ಭೂಚಲನೆಯೇ ಆಗಲಿ, ಜ್ವಾಲಾಮುಖಿ ಕಾರ್ಯಾಚರಣೆಯೇ ಆಗಲಿ ಆದಂತೆ ಕಾಣುವುದಿಲ್ಲ. ಇಂಥ ವಿಧ್ವಂಸಕ ಚಟುವಟಿಕೆಗಳು ಪೆಸಿಫಿಕ್ ಸಾಗರದ ಅಂಚು ಪ್ರದೇಶಕ್ಕೆ ಸೀಮಿತ ಗೊಂಡಿದ್ದುವು. ಜುರಾಸಿಕ್ ಕಾಲ ಅತ್ಯಂತ ಶಾಂತಕಾಲಗಳಲ್ಲಿ ಒಂದು. ಆಗ ಭೂಮಿಯ ಮೇಲ್ಮೈಯಲ್ಲಿ ಕೆಳಮಟ್ಟದ ಮೈದಾನಗಳಿದ್ದುವು. ಆದ್ದರಿಂದ ತೀರಪ್ರದೇಶಗಳಲ್ಲಿ ಸಹ ಅಪಾರವಾದ ಸುಣ್ಣಶಿಲಾ ನಿಕ್ಷೇಪವಾಗಿತ್ತು. ಇವುಗಳಲ್ಲಿ ಜೇಡು ಅಂಶ ಅತ್ಯಲ್ಪ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಇವುಗಳಲ್ಲಿರುವ ಜೀವ್ಯವಶೇಷಗಳು, ಅದರಲ್ಲಿಯೂ ಅಮ್ಮೊನೈಟುಗಳು, ಜುರಾಸಿಕ್ ಸ್ತೋಮವನ್ನು ಅನೇಕ ಶಿಲಾಪಾದಗಳನ್ನಾಗಿ ವಿಂಗಡಿಸಲು ಮತ್ತು ಪ್ರಪಂಚದ ನಾನಾ ಸ್ಥಳಗಳಲ್ಲಿನ ಶಿಲಾಪಾದಗಳನ್ನು s ಸರಿದೂಗಲು ಅತ್ಯಂತ ಸಹಕಾರಿಗಳಾಗಿವೆ.

ಇಂಗ್ಲೆಂಡಿನಲ್ಲಿ ಜುರಾಸಿಕ್ ಸ್ತೋಮ ಟೀಸ್ ನದೀಮುಖದಿಂದ ಡಾರ್ಸೆಟ್ ಪೈರ್‍ವರೆಗೆ ಹೊರಕಂಡಿದೆ. ವಿಲಿಯಮ್ ಸ್ಮಿತ್ ಈ ಸ್ತೋಮವನ್ನು ಎರಡು ಭಾಗಗಳನ್ನಾಗಿ ವಿಭಜಿಸಿದ್ದಾನೆ. ಕೆಳಭಾಗ ಜೇಡುಶಿಲೆಗಳಿಂದ ಕೂಡಿದೆ. ಇದಕ್ಕೆ ಲಯಾಸಿಕ್ ಶ್ರೇಣಿ ಎಂದು ಹೆಸರು. ಮೇಲ್ಭಾಗ ಸುಣ್ಣಶಿಲಾ ಪ್ರಧಾನವಾಗಿದೆ. ಅದಕ್ಕೆ ಊಲೈಟ್ ಶ್ರೇಣಿ ಎಂದು ಹೆಸರು. ಲಯಾಸಿಕ್ ಶ್ರೇಣಿಯನ್ನು ಶಿಲಾಸಂಯೋಜನೆ ಮತ್ತು ಜೀವ್ಯವಶೇಷಗಳ ಆಧಾರದ ಮೇಲೆ ಮೂರು ಸ್ಪಷ್ಟ ವಿಭಾಗಗಳನ್ನಾಗಿ ವಿಭಜಿಸಬಹುದು. ಕೆಳಭಾಗ ಮುಖ್ಯವಾಗಿ ಜೇಡುಶಿಲೆಗಳಿಂದ ಕೂಡಿದೆ; ಅವುಗಳ ಮಧ್ಯೆ ತೆಳುವಾದ ನೀಲಿ ಅಥವಾ ಕಂದುಬಣ್ಣದ ಶಿಲಾಪದರಗಳು ಇವೆ. ಮಧ್ಯಭಾಗದಲ್ಲಿ ಮರಳುಮಿಶ್ರಿತ ಜೇಡು ಮತ್ತು ಸುಣ್ಣನಿಕ್ಷೇಪಗಳಿವೆ. ಸುಣ್ಣನಿಕ್ಷೇಪಕ್ಕೆ ಮಾರ್ಲ್‍ಸ್ಟೋನ್ ಎಂದು ಹೆಸರು. ಯಾರ್ಕ್‍ಷೈರಿನಲ್ಲಿರುವ ನಿಕ್ಷೇಪಗಳಲ್ಲಿ ಕಬ್ಬಿಣದ ಕಾರ್ಬನೇಟುಗಳಿರುವುದರಿಂದ ಅವನ್ನು ಐರನ್‍ಸ್ಟೋನ್ ಎಂದು ಕರೆಯಲಾಗಿದೆ. ಮೇಲ್ಭಾಗ ಜೇಡು, ಜೇಡುಶಿಲೆ ಮತ್ತು ಮರಳು ನಿಕ್ಷೇಪಗಳಿಂದ ಕೂಡಿದೆ. ಇಂಗ್ಲೆಂಡಿನಲ್ಲಿ ಲಯಾಸಿಕ್ ಶ್ರೇಣಿಯ ಕೆಳಭಾಗವನ್ನು ಮತ್ತೆ ಮೂರು ಶಿಲಾಪಾದಗಳನ್ನಾಗಿ ವಿಭಜಿಸಲಾಗಿದೆ. ಅವುಗಳಿಗೆ ಅನುಕ್ರಮವಾಗಿ ಹೆಟ್ಟಿಂಗಿಯನ್, ಸೈನೆಮೂರಿಯನ್ ಮತ್ತು ಚಾರ್‍ಮೌತಿಯನ್ ಎಂದು ಹೆಸರು. ಲಯಾಸಿಕ್ ಶ್ರೇಣಿಯ ಮಧ್ಯ ಮತ್ತು ಮೇಲ್ಭಾಗಗಳನ್ನು ಅನುಕ್ರಮವಾಗಿ ಡೊಮೆರಿಯನ್ ಮತ್ತು ಟೋರ್ಸಿಯನ್ ಎಂದು ಕರೆಯಲಾಗಿದೆ.

ಲಯಾಸಿಕ್ ಶ್ರೇಣಿಯ ಮೇಲೆ ನಿಕ್ಷೇಪಗೊಂಡಿರುವ ಶಿಲೆಗಳನ್ನು ವಿಲಿಯಮ್ ಸ್ಮಿತ್ ಊಲೈಟುಗಳೆಂದು ಹೆಸರಿಸಿದ. ಇವನ್ನು ಕೆಳ ಮತ್ತು ಮೇಲ್ಭಾಗಗಳನ್ನಾಗಿ ವಿಭಜಿಸಲಾಗಿದೆ. ಇವೆರಡು ಅನುಕ್ರಮವಾಗಿ ಜುರಾಸಿಕ್ ಯುಗದ ಮಧ್ಯ ಮತ್ತು ಅಂತ್ಯ ಕಾಲಗಳನ್ನು ಪ್ರತಿನಿಧಿಸುತ್ತವೆ. ಕೆಳ ಊಲೈಟುಗಳನ್ನು ಲಯಾಸಿಕ್ ಶ್ರೇಣಿಯಿಂದ ಮಿಡ್‍ಪೋರ್ಡ್ ಮರುಳು ಪದರಗಳು ಬೇರ್ಪಡಿಸಿವೆ. ಕೆಳ ಊಲೈಟುಗಳನ್ನು ಕಿರು ಊಲೈಟು ಮತ್ತು ಮಹಾ ಊಲೈಟು ಶ್ರೇಣಿಗಳನ್ನಾಗಿ ವಿಭಜಿಸಲಾಗಿದೆ. 

ಫ್ರಾನ್ಸ್ ಮತ್ತು ಸ್ವಿಟ್‍ಜóರ್ಲೆಂಡಿನಲ್ಲಿರುವ ಜುರಾಸಿಕ್ ಸ್ತೋಮಗಳೂ ಅವುಗಳ ಶಿಲಾವಿಭಜನೆಯೂ ಇಂಗ್ಲೆಂಡಿನ ಜುರಾಸಿಕ್ ಸ್ತೋಮಗಳನ್ನು ಹೋಲುತ್ತವೆ. ಜರ್ಮನಿಯ ವಾಯುವ್ಯ ಭಾಗದಲ್ಲಿ ಜುರಾಸಿಕ್ ಸ್ತೋಮ ಉತ್ತಮವಾಗಿ ರೂಪುಗೊಂಡಿದೆ. ಅದನ್ನು ಮೂರು ಭಾಗಗಳಾಗಿ ವಿಭಜಿಸಿದೆ. ಕೆಳಭಾಗ ಕಪ್ಪುಜೇಡು ಶಿಲೆಗಳಿಂದ ಕೂಡಿದೆ. ಆದ್ದರಿಂದ ಇದಕ್ಕೆ ಕಪ್ಪು ಜೂರ ಎಂಬ ಹೆಸರುಂಟು. ಕಪ್ಪುಜೂರ ಶಿಲೆಗಳು ಇಂಗ್ಲೆಂಡ್ ಮತ್ತು ಫ್ರಾನ್ಸ್‍ಗಳಲ್ಲಿರುವ ಲಯಾಸಿಕ್ ಶ್ರೇಣಿಗೆ ಎಲ್ಲ ರೀತಿಯಲ್ಲಿಯೂ (ಅವುಗಳಲ್ಲಿರುವ ಅವಶೇಷಗಳೂ ಸೇರಿ) ಸರಿದೂಗುತ್ತವೆ. ಮಧ್ಯಭಾಗ ಕಪ್ಪು ಜೇಡು ಶಿಲೆ, ಕಂದು ಬಣ್ಣದ ಮರಳು ಶಿಲೆಗಳು ಮತ್ತು ಊಲಿಟಿಕ್ ರಚನೆಗಳಿರುವ ಕಂದು ಕಬ್ಬಿಣದ ಶಿಲೆಗಳಿಂದ ಕೂಡಿದೆ. ಆದ್ದರಿಂದ ಇದಕ್ಕೆ ಕಂದು ಜೂರ ಎಂಬ ಹೆಸರುಂಟು. ಕಂದು ಜೂರ ಶಿಲೆಗಳನ್ನು ಇಂಗ್ಲೆಂಡಿನ ಕಿರು ಊಲೈಟುಗಳು ಮತ್ತು ಮಹಾ ಊಲೈಟುಗಳಿಗೆ (ಫ್ರಾನ್ಸಿನ ಬೆಜೊಸಿಯನ್ ಮತ್ತು ಬೆತೋನಿಯನ್) ಸರಿದೂಗಿಸಲಾಗಿದೆ. ಮೇಲ್ಭಾಗ ಬಿಳಿ ಸುಣ್ಣಶಿಲೆಗಳಿಂದ ಕೂಡಿದೆ. ಇದಕ್ಕೆ ಬಿಳಿ ಜೂರ ಎಂಬ ಹೆಸರುಂಟು. ಬಿಳಿಜೂರ ಶಿಲೆಗಳು ಇಂಗ್ಲೆಂಡ್ ಮತ್ತು ಫ್ರಾನ್ಸ್‍ಗಳ ಚಾಕ್ ಸುಣ್ಣ ನಿಕ್ಷೇಪಕ್ಕೆ ಸರಿದೂಗುತ್ತವೆ.
ಜುರಾಸಿಕ್ ಯುಗದಲ್ಲಿ ಪೆಸಿಫಿಕ್ ಸಾಗರ ಉತ್ತರ ಅಮೆರಿಕದ ಕ್ಯಾಲಿಫೋರ್ನಿಯದಿಂದ ಅಲಾಸ್ಕದ ವರೆಗಿನ ತೀರಪ್ರದೇಶವನ್ನು ಆಕ್ರಮಿಸಿತ್ತು. ಇದು ಜುರಾಸಿಕ್ ಯುಗದ ಅಂತ್ಯದವರೆಗೂ ತೆರವಾಗಲಿಲ್ಲ. ಅದೇ ವೇಳೆ ಅಟ್ಲಾಂಟಿಕ್ ಸಾಗರ ಮೆಕ್ಸಿಕೋ ಕೊಲ್ಲಿಯಿಂದ ನುಗ್ಗಿ ಮೆಕ್ಸಿಕೋ, ಟೆಕ್ಸಾಸ್ ಮತ್ತು ಅರಿಜೋನ ಪ್ರದೇಶಗಳನ್ನು ಆಕ್ರಮಿಸಿತ್ತು. ಆರ್ಕ್‍ಟಿಕ್ ಸಮುದ್ರ ದಕ್ಷಿಣಕ್ಕೆ ಮಾಂಟಾನ, ಇಡಾಹೊ ಮತ್ತು ವೈಯೋಮಿಂಗ್ ವರೆಗಿನ ಪ್ರದೇಶಗಳನ್ನು ಆಕ್ರಮಿಸಿತ್ತು. ಜುರಾಸಿಕ್ ಅಂತ್ಯಕಾಲದಲ್ಲಿ ಆರ್ಕ್‍ಟಿಕ್ ಆಕ್ರಮಣ ಆರಿಜೋನ ಕಾಲರ್ಯಾಡೋ ಮತ್ತು ನ್ಯೂ ಮೆಕ್ಸಿಕೋಗಳ ವರೆಗೆ ವಿಸ್ತರಿಸಿತ್ತು. ಈ ವಿಸ್ತøತ ಸಮುದ್ರಕ್ಕೆ ಸನ್‍ಡ್ಯಾನ್ಸ್ ಸಮುದ್ರವೆಂದೂ ಅದರಲ್ಲಿ ಸಂಚಯನಗೊಂಡ ನಿಕ್ಷೇಪಗಳಿಗೆ ಸನ್‍ಡ್ಯಾನ್ಸ್ ಶಿಲೆಗಳೆಂದೂ ಹೆಸರುಂಟು. ಪೆಸಿಫಿಕ್ ತೀರಸಮುದ್ರ ಮತ್ತು ಸನ್‍ಡ್ಯಾನ್ಸ್ ಸಮುದ್ರಗಳು ಪ್ರತ್ಯೇಕವಾಗಿಯೇ ಇದ್ದುವು. ಆದರೆ ಕೆಲವು ವೇಳೆ ಅವು ಆರಗಾನ್ ಮತ್ತು ವಾಷಿಂಗ್ಟನ್ ಪ್ರದೇಶಗಳ ಮೂಲಕ ಸಂಪರ್ಕ ಹೊಂದಿದ್ದುದೂ ಉಂಟು. ಈ ಕಾಲದಲ್ಲಿ ರಾಕಿ ಪ್ರದೇಶಗಳಲ್ಲಿ ಪರ್ವತಗಳಿರಲಿಲ್ಲ. ಜುರಾಸಿಕ್ ಯುಗದ ಆದಿ ಮತ್ತು ಅಂತ್ಯ ಕಾಲಗಳಲ್ಲಿ ಈ ಪ್ರದೇಶ ಕೊಳ ಮತ್ತು ಸರೋವರಗಳಿಂದ ತುಂಬಿತ್ತು. ಇವುಗಳಲ್ಲಿ ಸಂಚಯಗೊಂಡಿದ್ದ ಶಿಲೆಗಳಲ್ಲಿ ಸರೋವರವಾಸಿ ಪ್ರಾಣಿಗಳ, ಬೆನ್ನೆಲುಬುಳ್ಳ ಪ್ರಾಣಿಗಳ ಮತ್ತು ಸಸ್ಯಗಳ ಅವಶೇಷಗಳು ಹೇರಳವಾಗಿವೆ. ಜುರಾಸಿಕ್ ಯುಗ, ಅದರಲ್ಲೂ ಮಧ್ಯಕಾಲ, ಜ್ವಾಲಾಮುಖಿಗಳ ಕಾರ್ಯಾಚರಣೆಗೆ ಒಳಗಾಗಿತ್ತು. ಸಾಗರ ನಿಕ್ಷೇಪಗಳ ಮಧ್ಯೆ ಇರುವ ಟ್ರ್ಯಾಪ್ ಮತ್ತು ಜ್ವಾಲಾಮುಖಿ ಬೂದಿ ಪದರುಗಳು ಈ ಅಂಶವನ್ನು ಸಾರುತ್ತವೆ. ಕೊನೆಯದಾಗಿ ಜುರಾಸಿಕ್ ಯುಗದ ಅಂತ್ಯಕಾಲದಲ್ಲಿ ಪೆಸಿಫಿಕ್ ತೀರಪ್ರದೇಶದಲ್ಲಿ ಭೂಚಲನೆಯಾಯಿತು. ಇದಕ್ಕೆ ನಿವೇಡಭೂಚಲನೆ ಎಂದು ಹೆಸರು. ಆಗ ಈ ಪ್ರದೇಶದ ನಿಕ್ಷೇಪಗಳೆಲ್ಲವೂ ಮಡಿಕೆಗಳಾಗಿ ಅನೇಕ ವಿಧಗಳಲ್ಲಿ ಕಲಕಲ್ಪಟ್ಟು, ಪರ್ವತಗಳಾಗಿ ಮೇಲೊಗೆಯಲ್ಪಟ್ಟವು. ಇದರ ಪರಿಣಾಮವಾಗಿ ಶಿಲಾರಸರವು ನಿವೇಡ ಮತ್ತು ಇತರ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಬ್ಯಾತೊಲಿತ್ ರೂಪದಲ್ಲಿ ಅಂತಸ್ಸರಣ ಹೊಂದಿದೆ.
ಇಂಡಿಯದಲ್ಲಿ ಜುರಾಸಿಕ್ ಸ್ತೋಮಗಳು ಸ್ಪಿಟಿ, ಕುಮಾಯೂನ್, ನೇಪಾಳ, ಕಾಶ್ಮೀರ ಹಜಾರ ಮುಂತಾದ ಹಿಮಾಲಯ ಪರ್ವತ ಪ್ರದೇಶಗಳಲ್ಲಿ; ಬಲೂಚಿಸ್ತಾನ ಮತ್ತು ಸಾಲ್ಟ್‍ರೇಂಜ್ ಪ್ರದೇಶಗಳಲ್ಲಿ; ಕಚ್, ರಾಜಸ್ತಾನ, ರಾಜಮಹಲ್ ಬೆಟ್ಟಗಳು, ಒರಿಸ್ಸದ ಪೂರಿ ಮುಂತಾದ ಕಡೆಗಳಲ್ಲಿ; ದಕ್ಷಿಣದ ಎಲ್ಲೋರ, ಓಂಗಲೆ, ಚೆನ್ನೈ, ತಿರುಚಿನಾಪಲ್ಲಿ ಮುಂತಾದ ಕಡೆಗಳಲ್ಲಿ ನಿಕ್ಷೇಪಗೊಂಡಿವೆ. ಇರಾನ್ ಕಡೆಗಿರುವ ಬಲೂಚಿಸ್ತಾನ್ ಶಿಲಾವರ್ಗ ಸುಣ್ಣಶಿಲೆಗಳಿಂದಲೇ ಕೂಡಿರುವುದು. ಹಿಮಾಲಯ ಪ್ರದೇಶದಲ್ಲಿ ಜೇಡುಶಿಲೆ ಹೆಚ್ಚಾಗಿ ನಿಕ್ಷೇಪಗೊಂಡಿದೆ. ಈ ಯುಗದ ಶಿಲಾಸ್ತೋಮವನ್ನು ಸಾಗರಜನಿತ ಶಿಲಾವರ್ಗ ಮತ್ತು ಸಾಗರಾಕ್ರಮಿತ ಪ್ರದೇಶಗಳ ಶಿಲಾವರ್ಗ ಎಂದು ಎರಡು ಬಗೆಯಾಗಿ ಪರಿಗಣಿಸಬಹುದು. ಹಿಮಾಲಯ ಪ್ರದೇಶಗಳು ಮತ್ತು ಬಲೂಚಿಸ್ತಾನಗಳಲ್ಲಿ ನಿಕ್ಷೇಪಗೊಂಡಿರುವ ಶಿಲೆಗಳು ಮೊದಲನೆಯ ವರ್ಗಕ್ಕೆ ಸೇರಿದವು. ಕಚ್ ಮತ್ತು ದಕ್ಷಿಣ ಭಾರತದ ಶಿಲೆಗಳು ಸಮುದ್ರಾಕ್ರಮಿತ ಪ್ರದೇಶಗಳ ನಿಕ್ಷೇಪಗಳು. ಮೊದಲನೆಯ ಪ್ರದೇಶಗಳಲ್ಲಿ ಜುರಾಸಿಕ್ ಯುಗದ ಕೆಲ್ಲೋವಿಯನ್ ಕಾಲದಲ್ಲಿ ಶಿಲಾನಿಕ್ಷೇಪ ಕಾರ್ಯ ನಿಂತು ಹೋದದ್ದು ಕಂಡುಬರುವುದು. ಈ ಕಾಲದಲ್ಲಿ ಆದ ಶಿಲಾನಿಕ್ಷೇಪ ಕಾರ್ಯದ ನಿಲುಗಡೆ ಪ್ರಪಂಚದ ಅನೇಕ ಕಡೆ ವರದಿಯಾಗಿದೆ. ಕೆಲ್ಲೋವಿಯನ್ ಅನನುರೂಪತೆಯ ಪ್ರಮಾಣ ಸ್ಪಿಟಿ ಮುಂತಾದ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಆಕ್ಸ್‍ಫರ್ಡಿಯನ್ ಕಾಲದ ವರೆಗೆ ಮಾತ್ರವಿದೆ; ಆದರೆ ಬಲೂಚಿಸ್ತಾನದಲ್ಲಿ ಈ ಅನನುರೂಪತೆಯ ಪ್ರಮಾಣ ಕ್ರಿಟೇಷಸ್ ಯುಗದ ಆದಿಕಾಲದವರೆಗೂ ಮುಂದುವರಿದಿದೆ. ಪಶ್ಚಿಮ ಮತ್ತು ಪೂರ್ವತೀರಗಳಲ್ಲಿ ಸಮುದ್ರಾಕ್ರಮಣ ಕೆಲ್ಲೋವಿಯನ್ ಕಾಲದಲ್ಲಿ ಪ್ರಾರಂಭಿಸಿ, ಜುರಾಸಿಕ್ ಯುಗದ ಕೊನೆಯ ವರೆಗೆ ಅಥವಾ ಕ್ರಿಟೇಷಸ್ ಯುಗದ ಆದಿಯ ವರೆಗೆ ಇದ್ದು, ನಿರ್ಗಮಿಸಿರುವುದು ವ್ಯಕ್ತವಾಗುತ್ತದೆ. ಸಾಗರ ತನ್ನ ಸ್ಥಿರ ನೆಲೆಯಲ್ಲಿ ನಿರ್ಗಮಿಸಿ ಬೇರೆಡೆಗಳಲ್ಲಿ ಆಕ್ರಮಣ ಮಾಡಿರುವುದು ಕುತೂಹಲಕಾರಿಯಾಗಿದೆ.

ಪ್ರೀಕೇಂಬ್ರಿಯನ್ ಕಾಲದಿಂದಲೂ ಸಮುದ್ರಾಕ್ರಮಣವನ್ನೇ ಕಾಣದಿದ್ದ ಪರ್ಯಾಯದ್ವೀಪ ಭಾಗ ಜುರಾಸಿಕ್ ಕಾಲದಲ್ಲಿ ಸಮುದ್ರಗಳ ಆಕ್ರಮಣಕ್ಕೆ ಒಳಪಟ್ಟಿತು. ಈ ಕಾಲದ ವರೆಗೆ ಇದ್ದ ಗೊಂಡ್ವಾನ ಭೂಭಾಗ ಜುರಾಸಿಕ್ ಕಾಲದಲ್ಲಿ ಒಡೆದು ಅದರ ಭಾಗಗಳು ಚಲಿಸಲು ಪ್ರಾರಂಭವಾಗಿದ್ದಂತೆ ಕಾಣುತ್ತದೆ. ಕಾಠಿಯಾವಾಡ್ ಪ್ರದೇಶದ ಉತ್ತರ ಭಾಗದಲ್ಲಿ ಸಮುದ್ರಾಕ್ರಮಣ ಈ ಕಾಲದಲ್ಲಿ ನಡೆಯಿತು. ಆಗ ನಿಕ್ಷೇಪಗೊಂಡ ಶಿಲೆಗಳು ಸುಮಾರು 1828.8 ಮೀ. (6,000 ಅಡಿ) ದಪ್ಪ ಇವೆ. ಅವೆಲ್ಲ ಲಘುವಾಗಿ ಸಮುದ್ರದ ಕಡೆಗೆ ಓರೆಯಾಗಿವೆ. ಈ ಸಮುದ್ರಾಕ್ರಮಣದಿಂದ ಉಂಟಾದ ನಿಕ್ಷೇಪಗಳು ರಾಜಸ್ತಾನದ ಬಿಕನೀರ್, ಜಯಸಾಲ್ಮೀರ್ ಮುಂತಾದ ಪ್ರದೇಶಗಳಲ್ಲೂ ಕಚ್‍ಗಳಲ್ಲೂ ರೂಪುಗೊಂಡಿವೆ. ಇವುಗಳಲ್ಲೆಲ್ಲ ಕಚ್ ಪ್ರದೇಶದ ನಿಕ್ಷೇಪಗಳು ಅತ್ಯುತ್ತಮವಾಗಿ ರೂಪುಗೊಂಡಿರುವುದರಿಂದ ಇವು ಜುರಾಸಿಕ್ ಸಮುದ್ರಾಕ್ರಮಣ ನಿಕ್ಷೇಪಗಳಿಗೆ ಮಾದರಿ ಪ್ರದೇಶವಾಗಿವೆ. ಈ ಶಿಲಾಪರಂಪರೆಯನ್ನು ಪಚಮ್, ಚಾರಿ, ಕಟ್ರೋಲ್ ಮತ್ತು ಉಮಿಯ ಎಂಬ ನಾಲ್ಕು ಭಾಗಗಳನ್ನಾಗಿ ವಿಭಜಿಸಲಾಗಿದೆ. ಇದು ಜುರಾಸಿಕ್ ಯುಗದ ಬ್ಯಾತೋನಿಯನ್ ಕಾಲದಿಂದ ಕ್ರಿಟೇಷಸ್ ಯುಗದ ನಿಯೊಕೋಮಿಯನ್ ಅಥವಾ ಆಪ್ಸಿಯನ್ ಕಾಲದ ವರೆಗಿನ ಶಿಲಾನಿಕ್ಷೇಪಗಳಿಂದ ಕೂಡಿದೆ.
ಜುರಾಸಿಕ್ ಯುಗದ ಜೀವರಾಶಿ : ಜುರಾಸಿಕ್ ಯುಗದ ಸಸ್ಯವರ್ಗ ಟ್ರಯಾಸಿಕ್ ಯುಗದ ಅಂತ್ಯದಲ್ಲಿದ್ದ ಸಸ್ಯವರ್ಗದ ನೇರಪೀಳಿಗೆ. ಆದರೆ ಶಂಕು ವೃಕ್ಷ (ಕೋನಿಫೆರ) ಮತ್ತು ತೆರ್ಮೆ (ಫರ್ನ್) ಜಾತಿಯ ಸಸ್ಯಗಳು (ಜರೀಸಸ್ಯಗಳು) ಹೇರಳವಾಗಿಯೂ ವೈವಿಧ್ಯಪೂರಿತವಾಗಿಯೂ ಇದ್ದುದು ಜುರಾಸಿಕ್ ಸಸ್ಯವರ್ಗದ ವೈಶಿಷ್ಟ್ಯ. ಭಾರತದ ರಾಜಮಹಲ್ ಸಸ್ಯವರ್ಗದಲ್ಲಿ ಸೈಕಡಾಯಿಡುಗಳು ಹೇರಳವಾಗಿದ್ದುವು. ನಿಲ್ಸೋನಿಯ, ಟೇನಿಯಾಪ್ಟರಿಸ್, ಓಟೊಜûಮೈಟಿಸ್, ಡಿಕ್ಟಿಯೊ ಜಮೈಟಿಸ್ ಮತ್ತು ಟಿಲೋಫಿಲಮ್ ರಾಜಮಹಲ್ ಕಾಲದ ಮುಖ್ಯ ಸೈಕಡಾಯಿಡ್ ಸಸ್ಯಗಳು. ಎಲಟೊಕ್ಲೇಡಸ್ ಮತ್ತು ರೆಟಿನೊಸ್ಪೊರೈಟಿಸ್ ಈ ಕಾಲದ ಶಂಕುವೃಕ್ಷಗಳು. ಇದೇ ಕಾಲದ ಅರಕೇರಿಯ ಮತ್ತು ಸೈಪ್ರಸ್ ಮರಗಳ ಎಲೆಗಳೂ ದೊರೆತಿವೆ. ಅವನ್ನು ಅನುಕ್ರಮವಾಗಿ ಪೇಗಿಯೋಫಿಲ್ಲಮ್ ಮತ್ತು ಬ್ರೇಕಿಫಿಲ್ಲಮ್ ಎಂದು ಕರೆಯಲಾಗಿದೆ. ಗ್ಲೆಕೊಟೈಟಿಸ್, ಕ್ಲ್ಯಾಡೊಪ್ಲೆಬಿಸ್, ಕೋನಿಯಾಪ್ಟರಿಸ್, ಸ್ಫೀನಾಪ್ಟರಿಸ್ ಮತ್ತು ಪೆಕಾಪ್ಟರಿಸುಗಳು ರಾಜಮಹಲ್ ಸಸ್ಯ ವರ್ಗದ ತೆರ್ಮೆಗಳು. ಜಬ್ಬಲಪುರ ಸಸ್ಯವರ್ಗದಲ್ಲಿ ಸೈಕಡಾಯಿಡ್ ಗಿಡಗಳು ಹೇರಳವಾಗಿಯೇ ಇದ್ದುವು. ಆದರೆ ಶಂಕುವೃಕ್ಷಗಳು ಅವುಗಳಿಗಿಂತ ಹೆಚ್ಚಾಗಿದ್ದುದೇ ಗಮನಿಸಬೇಕಾದ ಅಂಶ. ಜುರಾಸಿಕ್ ಯುಗದಲ್ಲಿ ಬೆನ್ನೆಲುಬಿಲ್ಲದ ಸಾಗರವಾಸಿ ಪ್ರಾಣಿಗಳು ಹೇರಳವಾಗಿದ್ದುವು. ಈ ಕಾಲದ ಸ್ತೋಮಗಳಲ್ಲಿ ಹವಳದ ದಿಬ್ಬಗಳು ಉಂಟು. ಆಸ್ಟ್ರಕೋಯಿನ, ಐಸಾಸ್ಟ್ರಿಯ, ತ್ಯಾಮ್ನಾಸ್ಟ್ರಿಯ, ತಿಕೋಸ್ಮಿಲಿಯ ಮತ್ತು ಮಾಂಟ್ಲಿವಾಲ್ಸಿಯಗಳು ದಿಬ್ಬ ರಚಿಸಿದ ಮುಖ್ಯ ಹವಳಗಳು. ಎಕಿನಾಯಿಡುಗಳು ಸಹ ತುಂಬ ಹೆಚ್ಚಾಗಿದ್ದುವು. ಸಿಡಾರಿಸ್, ಹೆಮಿಸಿಡಾರಿಸ್ ಮೊದಲಾದ ಪಂಚಸಮಸೂತ್ರಿ ಎಕಿನಾಯಿಡುಗಳೂ ಪೈಗಾಸ್ಟರ್, ಹೊಲೆಕ್ಟಿಪಸ್, ನೂಕ್ಲಿಯೊಲೈಟಿಸ್, ಕ್ಲಿಪಿಯಸುಗಳೇ ಮೊದಲಾದ ದ್ವಿಸಮಸೂತ್ರಿ ಎಕಿನಾಯಿಡುಗಳೂ ಮುಖ್ಯವಾದವು. ಕ್ರೈನಾಯಿಡುಗಳು ಅಲ್ಲಲ್ಲಿ ಹೇರಳವಾಗಿದ್ದುವು. ಅವುಗಳಲ್ಲಿ ಪೆಂಟಕ್ರೈನಸ್ ಉಲ್ಲೇಖಾರ್ಹ. ಬ್ರ್ಯಾಕಿಯೊಪೊಡಗಳು ಮುಖ್ಯವಾಗಿ ರಿಂಕೊನೆಲ್ಲಿಡೀ ಮತ್ತು ಟೆರಿಬ್ರಾಟುಲಿಡೆಗಳಿಂದ ಪ್ರತಿನಿಧಿಸಲ್ಪಟ್ಟಿದ್ದುವು. ಸ್ಪಿರಿಫೆರಗಳು ಜುರಾಸಿಕ್ ಆದಿಕಾಲದಲ್ಲಿ ಮಾತ್ರ ಇದ್ದುವು. ಲ್ಯಾಮಲಿಬ್ರ್ಯಾಂಕ್ ಮತ್ತು ಶಂಖಗಳಿಗೆ ನವೀನ ಲಕ್ಷಣಗಳು ಉಂಟು. ಟ್ರೈಗೋನಿಯ, ಆಸ್ಟ್ರಿಯ ಮತ್ತು ಪೊಲಡೋಮಿಯಗಳು ಮುಖ್ಯವಾದ ಲ್ಯಾಮೆಲಿಬ್ರ್ಯಾಂಕುಗಳು. ನಾಟಿಕ, ಪೂರೊಟೋಮ, ಸಿರಿತಿಯಮ್, ಟೆರಿಟೆಲ ಮತ್ತು ನರೀನಿಯಗಳು ಮುಖ್ಯ ಶಂಖಗಳು.

ಜುರಾಸಿಕ್ ಯುಗದ ಅತ್ಯಂತ ಹೇರಳವಾದ ಪ್ರಾಣಿವರ್ಗವೆಂದರೆ ಅಮನೈಟುಗಳು. ಅವುಗಳ ಹೊರಮೈ ಶೃಂಗಾರ, ವಿಭಾಜಕ ಭಿತ್ತಿಗಳ ಸೀಳಿಕೆಗಳ ಕ್ಲಿಷ್ಟತೆ ಊಹಾತೀತವಾಗಿವೆ. ಈ ಪ್ರಾಣಿಗಳ ವಿಕಾಸ ಅತಿವೇಗದಿಂದ ಸಾಗಿರುವುದರಿಂದ ಪ್ರತಿಯೊಂದು ಚಿಕ್ಕ ಶಿಲಾಪಾದದಲ್ಲಿಯೂ ಇವುಗಳಿಗೇ ಸೀಮಿತಗೊಂಡಿರುವ ವಿಶಿಷ್ಟ ಪ್ರಕಾರಗಳು ಇವೆ. ಭಾರತದ ಹಿಮಾಲಯ ಪ್ರದೇಶದ ಸ್ಟಿಟಿಜೇಡು ಶಿಲೆಗಳಲ್ಲಿಯೂ ಕಚ್‍ನಲ್ಲಿಯೂ ವೈವಿಧ್ಯಪೂರಿತ ಅಮನೈಟುಗಳು ಹೇರಳವಾಗಿ ಇವೆ. ಮ್ಯಾಕ್ರೊಸಿಫಲೈಟಿಸ್, ಇಂಡೊಸಿಫಲೈಟಿಸ್, ಒಪ್ಪೆಲಿಯ, ಪೆರಿಸ್ಪಿಂಕ್ಟಸ್, ರೈನೆಕಿಯ, ಹಾಪ್ಲೈಟಿಸ್, ಪಿಲ್ಲೊಸೆರಾಸ್, ಲಿಟ್ಲೋಸೆರಾಸ್, ಸ್ಟಿಟೆಸೆರಾಸ್, ಮಾಯೈಟಿಸ್ ಮತ್ತು ಕಾಸ್ಮೇಟಿಯಗಳು ಬಹು ಹೇರಳವಾಗಿವೆ. ಟ್ರಯಾಸಿಕ್ ಕಾಲದಲ್ಲಿ ಪ್ರಾರಂಭವಾದ ಬೆಲಿಮ್ನೈಟುಗಳು, ಈ ಕಾಲದಲ್ಲಿ ಶೀಘ್ರ ಉನ್ನತಿಯನ್ನು ಹೊಂದಿದುವು. ಗೆರಾರ್ಡಿ ಮತ್ತು ಸುಲ್ಕಾಕ್ಟಸ್ ಎಂಬ ಪ್ರಕಾರಗಳು ಇವುಗಳಲ್ಲಿ ಮುಖ್ಯವಾದವು.

ಜುರಾಸಿಕ್ ಯುಗದಲ್ಲಿ ಭೂಪ್ರದೇಶವನ್ನು ಸರೀಸೃಪಗಳು ಆಳುತ್ತಿದ್ದುದರಿಂದ ಇದನ್ನು ಸರೀಸೃಪಗಳ ಯುಗ ಎಂದು ಹೇಳಬಹುದು. ಇವು ಭೂಮಿಯ ಮೇಲೆ ಜನಿಸಿದ ಅತ್ಯಂತ ದೊಡ್ಡ ಗಾತ್ರ ಮತ್ತು ತೂಕದ ಪ್ರಾಣಿಗಳು. ಇವುಗಳಲ್ಲಿ ಸಸ್ಯಾಹಾರಿಗಳೇ ಹೆಚ್ಚು. ಇವು ನಡೆಯುವಾಗ ನಾಲ್ಕು ಕಾಲುಗಳನ್ನು ಊರುತ್ತಿದ್ದುವು. ಶರೀರ ನೆಟ್ಟಗೆ ಅಥವಾ ಸ್ವಲ್ಪ ಬಾಗಿರುತ್ತಿತ್ತು. ಈ ಸರೀಸೃಪಗಳು ಬಲು ವೇಗಗಾಮಿಗಳು, ಬ್ರಾಂಟೊಸಾರಸ್ ಎಂಬ ಡೈನೊಸಾರ್ 65 ಅಡಿ ಉದ್ದವಿತ್ತು. ಮಾಂಸಾಹಾರಿ ಡೈನೊಸಾರಸುಗಳೂ ಇದ್ದುವು. ಆಲೊಸಾರಸ್ ಇವುಗಳಲ್ಲೆಲ್ಲ ಅತ್ಯಂತ ದೊಡ್ಡದು. ಸ್ಟಿಗೊಸಾರಸ್ ಎಂಬ ಪ್ರಾಣಿಯ ಮೈ ಮೇಲೆ ಎಲುಬು ಫಲಕಗಳ ಕವಚವಿತ್ತು. ಇದು ಜುರಾಸಿಕ್ ಯುಗದ ವಿಶಿಷ್ಟ ಡೈನೊಸಾರ್. ಭೂಪ್ರದೇಶವನ್ನು ಡೈನೊಸಾರುಗಳು ಆಳುತ್ತಿದ್ದರೆ ಕೆಲವು ಸರೀಸೃಪಗಳು ಜಲಪ್ರದೇಶಗಳಿಗೆ ಹಿಂತಿರುಗಿದುವು. ಇವು ಮತ್ಸ್ಯಗಳೊಡನೆ ಜೀವನದಲ್ಲಿ ಸೆಣಸಲು ಬೇಕಾದ ದೇಹ ಮಾರ್ಪಾಡುಗಳನ್ನು ಅಳವಡಿಸಿಕೊಂಡವು. ಇಂಥ ಸರೀಸೃಪಗಳಲ್ಲಿ ಇಕ್ತಿಯೊಸಾರಸ್, ಪ್ಲೀಜಿಯೋಸಾರಸುಗಳು ಮುಖ್ಯವಾದವು. ಮೊಸಳೆ, ಆಮೆ ಮೊದಲಾದವು ಸಹ ಇದ್ದುವು. ಟೀರೊಸಾರಸ್ ಎಂಬ ಸರೀಸೃಪಕ್ಕೆ ಹಾರುವ ಸಾಮಥ್ರ್ಯವಿತ್ತು. ಬವೇರಿಯಾದ ಲಿತೋಗ್ರಾಫಿಕ್ ಸುಣ್ಣ ಶಿಲೆಯಲ್ಲಿ ರಕ್ಷಿಸಲ್ಪಟ್ಟಿರುವ ಅತ್ಯಂತ ಪ್ರಾಚೀನ ಕಾಲದ ಪಕ್ಷಿಗಳ ಅವಶೇಷಗಳು ಎಲ್ಲರ ಲಕ್ಷ್ಯವನ್ನು ಸೆಳೆಯುತ್ತವೆ. ಈ ಪಕ್ಷಿಗೆ ಆರ್ಕಿಯಾಪ್ಟರಿಕ್ಸ್ ಎಂದು ಹೆಸರು. ಇದಕ್ಕೆ ಪಕ್ಷಿ ಲಕ್ಷಣಗಳಿಗಿಂತಲೂ ಸರೀಸೃಪ ಲಕ್ಷಣಗಳೇ ಹೆಚ್ಚಾಗಿ ಇವೆ.
(ಡಿ.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ